ಗುರುವಾರ, ಅಕ್ಟೋಬರ್ 11, 2012










ಜನಪದ ತ್ರಿಪದಿಗಳಲ್ಲಿ ಮೂಡಿ ಬಂದ ಮಡಿವಾಳ ಮಾಚಿದೇವರು
(ಒಟ್ಟು ೧೦೧ ತ್ರಿಪದಿಗಳು )-
=============================== ======



ಸಂಪಾದಕರು : ಶ್ರೀ ಯುತ ಎ ಕೆ ರಾಮೇಶ್ವರ



----------------------------------------------------------------------
ಪ್ರಕಾಶಕರು: ಕವಿರಾಜ ಮಾರ್ಗ ಪ್ರಕಾಶನ
ಮಾತೋಶ್ರಿ ಗೋದು ತಾಯಿ ನಗರ
ಜೇವರ್ಗಿ ರಸ್ತೆ ಗುಲ್ಬರ್ಗ ಜಿಲ್ಲೆ.
ಮುದ್ರಕರು ನಿಧಿ ಗ್ರಾಫಿಕ್ಸ್ ಗುಲ್ಬರ್ಗ
ದೂರವಾಣಿ :೪೫೦೯೧೩ (ಎಸ್ ಟಿ ಡಿ ಕೋಡ್-೦೮೪೭೨ )

----------------------------------------------------------------------


ಸೌಜನ್ಯ -
ಕೃತಜ್ಞತೆ -

ಶ್ರೀ ಯುತ ಎ ಕೆ ರಾಮೇಶ್ವರ ಅವರಿಗೆ ನಮ್ಮ ಅನಂತ ಧನ್ಯವಾದಗಳು..


ಮೊದಲ ಭಾಗದಲ್ಲ್ಲಿ .....



||೧||

ಮಡಿವಾಳ ಮಾಚಯ್ಯ ಧೃಢವುಳ್ಳ ಶಿವ ಭಕ್ತ
ಮಾಡದಿಯನು ಕೊಂದು ರಗುತದಲಿ - ತಾ ತೊಳೆದ
ಒಡೆಯನೊಸ್ತಿರವ ಭಕುತಿಯಲಿ

||೨||

ಹಿಪ್ಪರಗಿ ಮರೆಯುತಲಿ ಉಪ್ಪರಗಿ ಆಗೆಂದು
ತುಪ್ಪ ಹೊಳೆಯಾಗಿ ಹರಿಯುತಲಿ - ಊರೊಳಗೆ
ಅಪ್ಪ ಮಾಚಣ್ಣ ಜನಿಸಿದನು

||೩||

ಹಿಪ್ಪರಗಿ ಶರಣನಿಗೆ ತಪ್ಪದಲೆ ಬಾಗುವೆವು
ಮುಪ್ಪಾಗದಿರಲಿ ನಮ್ಹಾಡ- ಮಾಚಯ್ಯ
ಅಪ್ಪಿ ಹಾದಿಯನು ತೋರಿಸಲಿ

||೪||
ಲಿಂಗಿಗಳು ಹಡೆದವರು ಸಂಗ ಭವಿಗಳದಲ್ಲ
ಲಿಂಗವಂತರ ಉಡುತೊಡುಗೆ -ತೊಳೆಯುತಲಿ
ಅಂಗ ಸವೆತನಕ ಕಾಯಕವು

||೫||

ಮನೆಗೆಲಸ ಮಡಿವಾಳ ದಿನಗೆಲಸ ಶಿವ ಭಕ್ತಿ
ಮನ ಬೆರೆತ ಲಿಂಗ ದೇಹದಲಿ -ಬಲು ಒಪ್ಪಿ
ಕನಕ ಜನಕಾಗಿ ಬಾಳುವೆಯು

||೬||

ಮಡಿವಾಳ ಮಾಚಣ್ಣ ಕಡುಭಕ್ತ ತಾನಾಗಿ
ಹಡೆದವರ ಕೆಲಸ ಕೈಕೊಂಡ -ಊರೊಳಗೆ
ಬಡವರಿಗೆ ಭಾಗ್ಯ ನಿಧಿಯಾದ

||೭||

ಸಂಗಯ್ಯಗ್ಹೋಗದೆ ಲಿಂಗನಿಗೆ ನೀರೆರೆಯದೆ
ಜಂಗು ಕಟ್ಟದಲೇ ಕಾಯಕವ-ಮಾಚಣ್ಣ
ಹಿಂಗಿಸನು ತನ್ನ ಕುಲಗೆಲಸ

||೮||
ಕಾಯಕವ ಪಾಲಿಸಿದ ನಾಯಕನು ವೀರನವ
ಮಾಯೆಗೊರೆಗಲ್ಲು ಮಾಚಯ್ಯ- ನಿತ್ಯದಲಿ
ಜೀಯ ವಾಸನೆಗೆ ಶಿವಶರಣ

||೯||

ಕಾಯಕವೇ ಕತ್ಯಾಗಿ ಘಾಯ ಮಾಡುತ ಹೊರಟ
ರಾಮರಾಯರೆಲೆ ನಡುಗಿದರು -ಮಾಚನಿಗೆ
ನ್ಯಾಯ ಸಹ ನಡುಗಿ ಸಭೆಯೊಳಗೆ

||೧೦||

ಎಂಟು ಕಟ್ಟುಗಳರಿತ ಬಂಟ ಮಾಚನೆ ಹೌದು
ನೆಂಟನವ ಹೌದು ವಾದಿಗಳ-
ಪರ ಮತಕೆ
ಕಂಟಕವೇ ಹೌದು ಸಭೆಯೊಳಗೆ 


||೧೧|

ಆರು ತಳಗಳ ಬಿಚ್ಚಿ ಬೀರಿದನು ಜಗಕೆಲ್ಲ
ಕಾರಗತ್ತಲೆಯು ಬೆಳಗಾಗಿ - ಶಿವ ಮತಕೆ
ಸಾರು ದೀವಟಿಗೆ ತಾನಾಗಿ


||೧೨||

ಪರ ಮಠದ ವಾದಿಗಳು ಥರ ಥರಾನೆ ನಡುಗುತಲಿ
ಸೊರಗಿ ಪಾದಕ್ಕೆ ಬೀಳುತಲಿ- ಮಾಚಯ್ಯನಿಗೆ
ಕರುಣಿಸಿರಿ ಗುರುವೇ ಎನ್ನುತಲಿ

||೧೩||

ವೀರಭದ್ರನೆ ಅಂದು ವೀರ ಮಡಿವಾಳಾಗಿ
ಸಾರುತಲಿ ವೀರ ಧರ್ಮವನೆ- ಜಗಕೆಲ್ಲ
ತೋರಿದನು ಮುಕ್ತಿ ಮಾರ್ಗವನು

||೧೪||


ಹಿಪ್ಪರಗಿ ಹಾರುವರು ಕಪ್ಪ ಕಾಣಿಕೆ ಹೊತ್ತು
ಗಪ್ಪ ಬರುತಿಹರು ಮಾಚನಿಗೆ- ಕೈ ಮುಗಿದು
ಅಪ್ಪ ನಿನ ಭಕ್ತರಾಗುವೆವು

||೧೫||

ಬಾಗೋಡಿ ಬಸವಣ್ಣ ಸಾಗುತಲಿ ಕಲ್ಯಾಣ
ಕೂಡಿಡಲು ಭೂಮಿ ಲಿಂಗಗಳ- ವೈಭವವ
ತೂಗುತಲಿ ಧರ್ಮ ತೊಟ್ಟಿಲವು

||೧೬||

ಬಸವ ಬೋಧೆಯು ಬೆಳೆದು ವಸುಧೆಯೊಳು ಹಬ್ಬುತಲಿ
ಹಸುಗೂಸು ಕೇಳಿ ಕಿವಿಗೊಟ್ಟು - ಚಣದೊಳಗೆ
ಹೊಸ ಮತವು ಉದಿಸಿ ಭೂಜನಕೆ

||೧೭||

ನಾಡ ಜಾಣರು ಬರಲು ಹೂಡುದಕೆ ವಾದಗಳು
ಕೂಡಿ ಕಲ್ಯಾಣ ಮಂಟಪಕೆ- ಮಾಚಯ್ಯ
ನೋಡಿ ಬಂದಲ್ಲಿ ತಲುಪಿದನು

||೧೮||


ಈರಾಡಿ ವೇದಗಳು ಹಾರಾಡಿ ವಾದಗಳು
ಜೋರಾಗಿ ನಡೆದು ನಿಲ್ಲುತಲಿ- ಸಾಗರವ
ಏರಿ ಕಡೆದಂತೆ ರಕ್ಕಸರು

||೧೯||


ಸುರರು ಕಡೆದಂತೆಲ್ಲ ವರಮಣಿಗಳುದಿಸಿದವು
ಚಿರಕಾಲ ಉಳಿದ ಭೂಮಿಯೊಳು - ವಚನಗಳು
ಶರಣಗಣ ಕಡೆದ ಮಣಿಯೇನೊ

||೨೦||

ವಾದ ಚಕಮಕಿ ಬೆಂಕಿ ದೂದಿ ಕೂಮುತ ಸುಡಲು
ವಾದಿಗಳ ಕಾದ ತಲೆಯಾರಿ-ವಚನಗಳ
ನಾದ ತುಂಬುತಲಿ ಭವಿಗಳಿಗೆ

||೨೧||
ಕಲ್ಯಾಣ ಮಂಟಪಕೆ ಬಲ್ಲವರು ಬಂದಿರಲು
ಅಲ್ಲಗಳೆಯುದಕೆ ಶರಣರನು -ಮಾಚಯ್ಯ
ಎಲ್ಲರೊಳಗವನು ಮಿಗಿಲಾದ


||೨೨||

ನೂರೊಂದು ತಲಗಳಿಗೆ ನೂರೆಂದು ಶರಣರನು
ವೀರ ಮಾಚಣ್ಣ ಕರವಾಳು - ಬಸವನಿಗೆ
ಧೀರ ಕಾಯಕದ ಹುರಿಯಾಳು

||೨೩||

ಶಿವ ಭಕ್ತರರಿವೆಗಳ ತವಕದಲಿ ತೊಳೆ ತರುವ
ಭಾವಿ ಜನರ ಮುಟ್ಟುವನೆ-ಮಾಚಯ್ಯ
ಜವಾನದವಡ್ಯಾಗ ಕೂಮತಕೆ

||೨೪||

ಬಸವಾದಿ ಪ್ರಮಥರ ಹಸನಾಗಿ ತೊಳೆದರಿವೆ
ಬಿಸಲಿಗೋಣ ಹಾಕಿ ಗಳಿಗೆಗಳ -ಹೊರಗೊಂಡು
ಬಸವನರಮನೆಗೆ ಬರುವಾಗ

||೨೫||

ಹೆಮ್ಮೆಯಲಿ ಕೊಬ್ಬಿರುವ ಹುಮ್ಮನರ ಪಾಪಿಗಳು
ತಮ್ಮ ತಮ್ಮೊಳಗೆ ಮಾತಾಡಿ- ಮಾಚನಿಗೆ
ಬಿಮ್ಮದಲಿ ತಡವಿ ಹಾದಿಯಲಿ

||೨೬||
ಹೊತ್ತ ಮುಟ್ಟಿಯೂ ತೋರಿ ಕತ್ತಿಯೊರೆಯಿಂದಿರಿದು
ಕತ್ತರಿಸಿ ತೋರಿ ಪಾಪಿಗಳ - ಮುಗಿಲೊಳಗೆ
ಎತ್ತ ನೋಡಿದರು ಕತ್ತಲೆಯು

||೨೭||

ಕಾಯಕವು ನೆನಪಾಗಿ ಮಾಯವಾಯಿತು ಸಿಟ್ಟು
ಜೀಯ ಬಸವನಿಗೆ ಸೇವೆಯನು-ತಪ್ಪಿಸಿದೆ
ಹೇಯವಿಲ್ಲವೆಂದು ಶಪಿಸುತಲಿ

||೨೮||

ಧೂಳ ಸಂಜೆಯ ಮುಂದೆ ಬೀಳುತೇಳುತ ಸಾಗಿ
ಕಾಲ ಜಂಗನ್ನು ಬಲು ನುಡಿಸಿ -ಮಾಚಯ್ಯ
ವೇಳೆಗರಮನೆಗೆ ತಲುಪಿದನು

||೨೯||

ಅರಸ ಬಿಜ್ಜಳರಾಯ ಹರುಷದಲಿ ವಾಲಗವ
ನೆರಸಿ   ನಡೆಸಿದ್ದ ಚಾವಡಿಯ - ಕೇಳುದಕೆ
ಪಾರಸಿ ಕೂಡಿತ್ತು ಗಾವುದಕೆ

||೩೦||

ಹೇಳುವುದು ಕೇಳುವುದು ಆಳ್ವ ಭೂಪನೆ ಉಂಟು
ಮೇಳೈಸು ನಮ್ಮ ಕೋರಿಕೆಯ - ಪಿಸುಣಿಗರು
ಹೇಳ ತೊಡಗಿದರು ಕೈ ಮುಗಿದು




||೩೧||

ಅಗಸ ಮಡಿವಾಳಯ್ಯ  ಒಗೆಯನರಸನ  ಅರಿವೆ
ಮಿಗಿಲೆಂದು ಬಿಚ್ಚ್ಚಗತ್ತಿಯಲಿ-ಜನಕೊಂದು 
ಒಗೆದಾಡಿ ಊರನಂಜಿಸುವ 

||೩೨||

ಶರಣ ತಾನೆಂದೆಂಬ ತುರುಸು ಮಾತಿನ ಮಾಚ 
ಮರೆಯುವನೆ ತನ್ನ ಒಣ ಹೆಮ್ಮೆ-ದೊರೆಗಳಿಗೆ 
ಅರಸೆಂದು ಕರೆಯನವನೆಂದು 

||೩೩||

ಅರಸ ಬಿಜ್ಜಳರಾಯ  ಬಿರುಸು ಮಾತನು ಕೇಳಿ
ಕರೆಸಿ ಕೊಲ್ಲೆಂದು ಅಪ್ಪಣೆಯ- ಚಾರರಿಗೆ 
ಸಿರವ ಕತ್ತರಿಸಿ ಬೆಲ್ಲೆಂದು

||೩೪||

ಜಟ್ಟಿಗಳ  ಕರೆತರಿಸಿ  ಜುಟ್ಟ ಹಿಡಿದೆಳತರಿಸಿ 
ಕಟ್ಟಿ ಹೊಡೆದವನ ಬಿಗಿ ಹಾಕಿ- ನೀವೆಲ್ಲ
ಕುಟ್ಟಿ ನಾಡೆಂದ ಒಣಕಿಯಲಿ 

||೩೫||

 ಕೇಳಿ ಕಂಗಾಲಾಗಿ ಹೇಳಿದನು ಬಸವಣ್ಣ 
ಕೀಳ ಕೆಲಸರಸ  ಕೇಳೆಂದ -ಮಾಚಯ್ಯ 
ಭಾಳಲೋಚನನ  ಅವತಾರಿ

||೩೬||
ಬಸವನಾಡಿದ  ಮಾತಾ ಕಸಕಿಂತ ಕಡೆ ಮಾಡಿ
ನಸುಕಿನಲಿ ಕಳಸಿ ಜಟ್ಟಿಗಳ-ಆನೆಗಳ
ಕಸ ತುಳಿಸಿದಂತೆ  ತುಳಿಸುದಕೆ

||೩೭||

ಮರು ದಿನವೆ ನಸಕ್ಹರಿದು   ಹರಸಿದನು  ದಿನದೊಡೆಯ
ಶರಣ ಮಾಚನಿಗೆ ಬಲು ಬೆಳಕ -ಕಾಯಕದ 
ಕಿರಣ  ಬೆಳಗೆಂದ ಜಗಕೆಂದು  

||೩೮||

ವೀರ  ಘಂಟೆಯನಾದ  ಕೇರಿ ಕೇರಿಗೆ  ತಲುಪಿ 
ಸಾರಿ ಮಾಚಯ್ಯನ  ಬರುವನ್ನು-ಶರಣರಿಗೆ 
ಬೀರಿ ಕಾಯಕದ ಹೊತ್ತನ್ನು 

||೩೯||

ತಟ್ಟಲಾ  ಮಾಚನಿಗೆ ಜಟ್ಟಿಗಳು  ಬರಲಾಗ 
ಬಟ್ಟ ಬಯಲಲ್ಲಿ ಎದುರಾಗಿ - ಮಾಚಯ್ಯ 
ಗುಟ್ಟಿ ಲಘು ಮಂತ್ರ ಜಪಿಸಿದನು

||೪೦||

ಉಘೇ ಗುರು  ಪ್ರಭುದೇವ ಉಘೇ  ಭಕ್ತಿನಿಧಿ ಬಸವ
ಉಘೇ ಜ್ಞಾನಿ  ಚೆನ್ನ ಬಸವನೆ -ಉಘೆಲಿಂಗ
ಉಘೇ ಶರಣರೆ ಲಿಂಗವಂತರೆ

||೪೧||

ಹಿರಿಯರೇ ಸಲುಹಿರೈ ಕಿರಿಯ ಮಾಚನ್ನಿಂದು 
ನರಭವಿಗಳೆನ್ನ ತಟ್ಟುವರು -ನಾಮುಂದೆ 
ಕುರಿಗಳಿಗೆ ತಿಳಿಸಿ ಹರ ಮತವ

||೪೨||

ಸಿಟ್ಟಿನಲ್ಲಿ ಸಿಡಿಗುಂಡ  ಬಿಟ್ಟು ಬಿಡದೆಲೆ ಕಾರಿ
ಸುಟ್ಟ  ಜಟ್ಟಿಗಳ  ಆನೆಗಳ-  ಬಿಜ್ಜಳನು 
ಬಿಟ್ಟ ನಿಟ್ಟುಸಿರ ನಿಂತಲ್ಲಿ 

||೪೩||

ಪಟ್ಟದಾ  ಮದಗಜವಾ  ಬಿಟ್ಟ  ಬಿಜಳರಾಯ 
ರಟ್ಟಿಯಲಿ   ಹಿಚುಕಿ ಎಳೆದೊಗೆದ-ಮಾಚಯ್ಯ
ಹುಟ್ಟಿದೀ ನರಲೋಕ ಕಲಿರುದ್ರ   

||೪೪||

ಮಾರಿಮಸಿ  ಹತ್ತುತಲಿ  ದೂರ ಸರಿದಾಗರಸ 
ನೀರ ಸಿಗದಂತೆ ಮಾಡುವೆನು-ಮಾಚನಿಗೆ
ಚಾರ ಕಾಲಿಯ ಜಲಕಿಡಿಸಿ 

||೪೫||

ಅರಸನಪ್ಪಣೆಯನ್ನು ಸಿರಬಾಗಿ  ಹೊತಗೊಂಡು 
ಸರ್ರನೆ  ಸಾಗಿದರು ಸೇವಕರು-ಕಾವಲೆಯು 
ಬರದಂತೆ ಗುಂಗಿ ನೀರ್ಗೆರಿಗೆ 

||೪೬||

ಪಟ್ಟಣದ ಕೆರೆತೊರೆಯ ಕಟ್ಟು  ಕಾವಲಿಗಿಟ್ಟ
ತಟ್ಟಂತ  ನೀರು  ಸಿಗದಂತೆ-ಮಾಡಿದರು 
ಕೆಟ್ಟ  ಪಿಸುಣಿಗರು ಮಾಚನಿಗೆ 

||೪೭||

 ಮಡದಿಯನು ಕರಕೊಂಡು ಕಡು ಭಕ್ತ ಮಾಚಯ್ಯ 
ಬಿಡದೆ ತಿರುಗಿದನು ಕೆರೆತೊರೆಯ -ಕಾವಲೆಯು 
ನಡೆದಿತ್ತು ಎಲ್ಲಿ ಹೋದಲ್ಲಿ 

||೪೮||

ಅಂಗದೊಳು  ಬೆರತಿರುವ ಲಿಂಗವೇ  ನೀಗತಿಯು
ಭಂಗವಾಗುವುದು  ಕಾಯಕವು-ಹಿಪ್ಪರಗಿ 
ಸಂಗ  ನೀನೆನ್ನ  ಸಲುಹಿಂದು 

||೪೯||


ಹೊತ್ತು ಮುಣುಗುತ ಬಂತು  ಬತ್ತಲೆಯ ಜಗಕೆಲ್ಲ 
ಸತ್ಯ  ನಂದಿಂದು  ಹುಸಿಯಾತು -ಕಾಯಕದ
ಬುತ್ತಿ ತೀರಿತೈ ಈ ದಿನಕೆ

||೫೦||

ಮಾಚಯ್ಯನಾ  ಮಡದಿ ಸೂಚನೀಯುತಲಿ  
ಯಾಚನೆಯು ಬೇಡ  ಪತಿದೇವ - ನೀನೆನ್ನ 
ನಾಚದಲೆ ಹಿಂಡು ಎದೆರಗುತ



||೫೧||
ಊರ ಮುಂದಿನ ಸರವು ಯಾರ ಸುಳಿವೇ ಇಲ್ಲ
ನೀರು ಸಿಗದಿನ್ನು ಪತಿದೇವ -ಎದೆರಗುತ
ನೀರಲರಿವೆಗಳ ತೊಳೆದ್ಹಾಕು 

||೫೨||

ಹಡದಿ ಹಾಸಿದ  ಮಾಚ ಮಡದಿಯೆದೆ  ತಾಕೊಯ್ದ 
ಒಡನೆ ಬಲು ಚಿಮ್ಮಿ  ಬಿಸಿರಗುತ -ಹೊಳೆಯಾಗಿ
ಮಡುಗಟ್ಟಿ  ನೀರ ಕರೆಯಾತು (ಕೆರೆಯಾಯ್ತು??))

||೫೩||

ನೀರ ಕಾಣುತ ಮಾಚ ತೀರಿಸಿದ  ಕಾಯಕವ
ಆರಿಸರಿವೆಗಳ  ಮಡಿಮಾಡಿ -ಕೂಗಿದನು
ಬಾರೆ ಸಂಗಡತಿ ತಡವಾತು

||೫೪||

ಬಸವಾದಿ ಪ್ರಮಥರಾ  ಹಸನ ಪೂಜೆಗೆ  ನಾವು
ನಸು ನಗುತ ಹೋಗಿ ತಲುಪೋಣ-ಸಮಯದಲಿ 
ನೊಸಲಗಣ್ಣನಿಗೆ  ಬಾಗುದಕೆ 

||೫೫||

ಅನ್ನು ತನ್ನುತ  ಮಾಚ ಮುನ್ನ ಮುನ್ನವೇ ಹೊರಟ 
ಕಿನ್ನ ಕಿನ್ನರಿಯ ವೇಗದಲಿ-ಹೊರಗೊಂಡು
ಚೆನ್ನ ಬಸವರಿಗೆ ಶರಣೆಂದು

||೫೬||

ಮುನ್ನವೇ ಇದನರಿತ ಚೆನ್ನ  ಬಸವಾದಿಗಳು 
ನನ್ನೆಯಲಿ ಅಪ್ಪ  ಮಾಚಯ್ಯ -ಬೀರಿದರು
ಉನ್ನತದ ಶರಣ ಮಂಟಪಕೆ 

||೫೭||

ಅನುಭಾವ ಮಂಟಪಕೆ ಅನುನಯದಿ ಹಾಡುತಲಿ 
ಬನವು ಕೂಗುತಲಿ ಮಾಚಯ್ಯ - ಶರಣೆಂದು 
ಜನವಿಂದು ಭಜನೆ ಮಾಡುವದು 

||೫೮||

ಮಡಿವಾಳ ಮಾಚಯ್ಯ  ಧೃಢವುಳ್ಳ  ಶಿವ ಭಕ್ತ 
ಮಡದಿಯನು  ಕೊಂದು ರಗುತದಲಿ -ತಾತೊಳೆದ 
ಒಡೆಯನೊಸ್ತಿರವ ಭಕುತಿಯಲಿ

||೫೯||

ಪತಿಕಾಯಕ ಸೇರಿ ಮತಿವಂತಿ  ಎದೆಗೊಟ್ಟು 
ಗತಿಯ ಹೊಂದಿದಳು ಸಗ್ಗದಲಿ-ಶಿವಗಣವು
ಅತಿನುತಿಸಿ ಮಾನ ಸಲ್ಲಿಸಿತು
||೬೦||

ಮುತ್ತೈದಿ ನಿನ ಮರಣ ಎತ್ತ ಹೋದರು ಪೂಜೆ
ಕಸ್ತೂರಿನಾತವಿದ್ದಂತೆ -ಜಗದೊಳಗೆ
ಉತ್ತಮರ ಮನಕೆ ಕಾಯಕವು

 ||೬೧||

ಮುಂಬರುವ ಸ್ಥಿತಿಗತಿಗೆ  ಕಂಬ ಮಾಚನೆ ಬೇಕು
ನಮ್ಬಿಗೆಯ ಧೀರ ಅವ ಬೇಕು-ಬಸವನಿಗೆ
ಮುಂದೆ ಕೂಡುದಕೆ  ಶಿವಗಣಕೆ

||೬೨||

ಎಂದು ಹೇಳಿದ ಶಿವನು ಅಂದು ಕೂಡಿದ ಗಣಕೆ 
ಇಂದು ಸರಿ ಉಂಟೆ ಸಗ್ಗದಲಿ-ಪೂಜಸಿರಿ (ಪೂಜಿಸಿರಿ??))
ಬಂದಿರುವ ಸತಿಗೆ ಕೈ ಮುಗಿದು

||೬೩||

ಹಡದಿ ಹಾಸಿದ ತಳವು  ಮಡದಿಯಾನೆತ್ತರವು
ಮಡವು  ಮಾಚಯ್ಯ ಕೆರೆಯೆಂದು -ಕಲ್ಯಾಣ
ಪಡುವಣಕೆ ಇಂದು ಮೆರೆಯುವುದು 

||೬೪||

ಮರುದಿನವೇ ಬಿಜ್ಜಳನು ಕರೆ ಕಳಿಸಿ ಬಸವನಿಗೆ
ನರಪಾಪಿ ನನ್ನ ಉಳಿಸೆಂದು  -ಕೈ ಮುಗಿವೆ 
ಶರಣ ಮಾಚನಿಗೆ ಕ್ಚಮಿಸೆಂದು 

||೬೫||

ದಂಡ ನಾಯಕ ಬಸವ  ಬಂಡು ಆದೆನು ನಾನು 
ಕಂಡ ಜನ ಮಾತ ಕಿವಿಕೊಟ್ಟು -ಪಿತ್ತೇರಿ
ಹೆಂಡ ಕುಡಿದಂಗೆ  ಮಂಗನಿಗೆ

||೬೬||

ಮಂತ್ರಿ ಬಸವನೆ ಕೇಳು ತಂತ್ರಿಗಳ ಮಂತ್ರಗಳು 
ಜಂತ್ರದಲಿ ತಲೆಯ ಕೊಟ್ಟಂತೆ -ಬೇಡಿನ್ನು 
ತಂತ್ರದೊಡೆತನವು ಅರಸನಿಗೆ 

||೬೭||

ಬಸವೇಶನಲ್ಲಮಗೆ  ಹಸಗೆಟ್ಟಿತೀಕಾಲ 
ಮಸಣವಾಗುವುದು ಕಲ್ಯಾಣ-ಇಲಿಂದ
ನುಸುಳುವುದೇ ಲೇಸು ಶರಣರಿಗೆ

||೬೮||

ವಿಕ್ರಮಾ ವರುಷದಲಿ ಹೊಕ್ಕೆವೀ  ಕಲ್ಯಾಣ
ವಕ್ರ ರಾಕ್ಷಸವು  ಬರಲಿಂದು -ಕಲಿಕಾಲ  
ನಕ್ಕು ಶರಣರನು  ನುಂಗುವುದು 

||೬೯||

ಜಗದೇವ ಬೊಮ್ಮಯ್ಯ  ಮಿಗಿಲಾದ ಮಾಚಯ್ಯ 
ಬಗೆಸುವರು ಹಿತವ ಶರಣರಿಗೆ-ಬಿಜ್ಜಳನ 
ನೆಗೆದು ಕೊಲ್ಲುವರು ಕದನದಲಿ

||೭೦||

ಅಮರ ಗಣಗಳ ಕೂಡಿ ಗಮನಿಸಿದ ಶರಣರಿಗೆ 
ಮಮತೆಯಲಿ ಕರೆಸಿ ತಿಳಿಸಿದನು-ಬಸವಯ್ಯ
ನಮಿಸಿ ಸಂಗಮಕೆ ಸಾಗಿದನು


||೭೧||

ಬಸವ ಪಯಣದಿ ಕೇಳು ಮಸಣವೆನಿಸಿತು ಊರು
ಗಸನೆ ಆ ಸುದ್ಧಿ ಹರಡುತಲಿ-ಅರಸನಿಗೆ
ವಿಷ್ಯ ತಿಳಿಯಲಿಲ್ಲ  ಎಲ್ಳಸ್ಟು 

||೭೨||

ಬಸವನು ಚಿಂತಿಸುವ ವೆಸನದಲಿ ಮುಣಗಿರಲು
ಹೊಸ ಮಂತ್ರಿ ಚೆನ್ನ ಬಸವುಂಟು -ಬಿಜ್ಜಳಗೆ 
ನಸುನಗುತ ನುಡಿಯೇ ವಾಲಗವು

||೭೩||

ಚೆನ್ನ ಬಸವನ ಕರೆಸಿ ಹೊನ್ನ ಕಡಗವ ಹಾಕಿ 
ಇನ್ನು ಚೆನ್ನಬಸವ ದಂಡೇಶ-ಅರಸನಿಗೆ
ಸನ್ನುತಕೆ ಸಲಹೆ ಮಂತ್ರೀಶ 

||೭೪||

ಖುಲ್ಲ  ಬಿಜ್ಜಳರಾಯ  ಬಲ್ಲವನು ಆಗುವನೆ
ಇಲ್ಲದಕೆ ಮತ್ತೆ ಕಿವಿಗೊಟ್ಟ -ಕೊಂಡಿಗಳು 
ಅಲ್ಲಗಳೆಯುದಕೆ  ಲಿಂಗಿಗಳ 

||೭೫||

ಸಲ್ಲು ಸಲ್ಲಿಗೆ ಬಂಡು ಸಲ್ಲಾದ ಮಾತೆತ್ತಿ 
ನಿಲ್ಲದಲೆ ಚಾಡಿ ಹೇಳಿದರು-ಬಿಜ್ಜಳಗೆ
ತಲ್ಲಣಿಸಿ ಎದೆಯು ದಿನದಿನಕೆ 

||೭೬||

ಮೆಚ್ಚಿದನು ಮಧುವರಸ ಹೆಚ್ಚಿನವ ಹರಳೆಂದು
ನೆಚ್ಚಿತಾ ಮಗಳ ಕೊಡಲೊಪ್ಪಿ-  ಬೀಗತನ
ಇಚ್ಚೆ ಮಾಡಿದನು ಹೊನನ್ನಿಗೆ 

||೭೭||

ಹರಳ ಮಧುವರಸನಿಗೆ ಮರುಳ ಮಾಡಿದನೆಂದು 
ಗರಳ ಸಿಟ್ಟಿನಲ್ಲಿ ಹಾರುವರು-ಬಿಜ್ಜಳಗೆ
ಕೆರಳಿ ಚಾಡಿಯನೆ ಹೇಳಿದರು 

||೭೮||

ಹೊಳೆಯ ತಾ ಹರಳಯ್ಯ  ಆಲಸಿ ಮಧುವರಸನಿಗೆ 
ಹೊಲೆಯ ಹಚ್ಚಿದನು ಕುಲಕೆಲ್ಲ -ಎಳೆತರಿಸಿ
ಗಳುಪಿಸದೆ  ಕಣ್ಣ ಕೀಳಿಸಿರಿ 

|| ೭೯||
ಚೆನ್ನ ದಂಡಾದಿಪನು ಕುನ್ನಿ ಅರಸನಿಗೆಂದ 
ಹೊನ್ನು ಶಿವಶರಣ ಹರಳಯ್ಯ-ಕುಲವುಂಟೆ 
ಜೊನ್ನ ತಲೆಯವನ ಭಕ್ತಿರಿಗೆ 

||೮೦||

ಹರನ ಭಕ್ತರ ಮಹಿಮೆ ಒರಗೆ ಹಚ್ಚುವದುಂಟೆ
ಪರಿಕಿಸಲು ಉಂಟೆ  ಫಣಿರತ್ನ-ಜಗದೊಳಗೆ
ತರಕಿಸಲು ಉಂಟೆ ಶಿವ ಭಕ್ತಿ  



||81||

ಪೆಂಗಿ ಬಿಜ್ಜಳ ಬೇಡ ನುಂಗುವುದು ಈ ಕಜ್ಜ 
ಭಂಗವಾಗುವುದು ನಿನ ರಾಜ್ಯ-ಮನೆ ದೀಪ 
ಇಂಗಿ ಹೋಗುವುದು ಕಡೆ  ತನಕ 


||82||

ಕೇಳದಲೇ  ಬಿಜ್ಜಳನು  ಹೇಳಿ ಎಳೆ  ತರಿಸಿದನು 
ಕೀಳಿಸಿದ  ಕಣ್ಣ ನಿಂತಲ್ಲೆ-ನೋಡದಲೆ 
ಹೋಳಾತು  ಶಿವಶರಣರೂಳಿಗವು 

||83||

ಮಾದರಸು ಹರಳಯ್ಯ  ಹೋದ ದಿನ ಶಿನಡಿಗೆ 
ಬೀದಿ ಬೀದಿಗಳು ಕಿಡಿಕಾರಿ  -ಕಲ್ಯಾಣ
 ಗಾದಿ  ಹೌಹಾರಿ  ತಳಮಳಿಸಿ 

||84||

ಹೀನಗೆಲಸವ  ಮಾಡಿ ಮಾನ ಪಡೆದೆನ್ನುತಲಿ 
ನಾಣಿ ತನಗಾರು ಸರಿಯುಂಟೆ -ಜನದೊಳಗೆ 
ಕಾಣೆಂಬ  ಮಬ್ಬು  ಮದವೇರಿ 

||85||

ಅಂದು ಸಂಜೆಗೆ  ಸಿವನೆ  ಹೊಂದಿ ಮಂಟಪ ಕೂಡಿ 
ಬಂಡ ಬವಣೆಯನು  ಗಳೆಯುದಕೆ -ದಂಡೇಶ 
ಸಂದಣಿಗೆ  ಉಳವಿ  ಸೇರೆಂದ 

||86||

ಬಿಚ್ಹಗತ್ತಿಯ  ಮಾಚ ಕೆಚ್ಚೆದೆಯ ಬಂಟನವ 
ರೊಚ್ಹ  ಬೊಮ್ಮಯ್ಯ ಜಗದೇವ-ನಿಮ್ಮಾಣೆ 
ನುಚ್ಚು ಬಿಜ್ಜಳನ ಕಡಿಯುವೆವು 

||87||

ಊಳಿಗವು  ಹೊರಡುದಕೆ  ನಾಳಿನಾ  ಉದಯದೊಳು 
ಕಾಳಗವು ಎಸಗೆ ಕೂಮತಕೆ-ಮಾಚಯ್ಯ ಹೇಳಿ ಸಜ್ಜಾದ ಕಾಳಗಕೆ 

||88||

ಕಾಳರುದ್ರನು  ಮಾಚ ಭಾಳಲೋಚನ ಭಕ್ತ 
ಮೊಲ್ಲ ಬೊಮ್ಮಯ್ಯ ಜಗದೇವ-ಮನೆಹೊಕ್ಕು 
ಸೀಳಿ ತಲೆಹೊಡೆದು  ಬಿಜ್ಜಳನ 

||89||

ಅಳಿಯ ಬಿಜ್ಜಳರಾಯ ಕೊಲೆಯ ಕೇಳುತಲೆದ್ದ ತಳಮಳಿಸಿ ಬಳಗ ಕೂಡಿಸಿದ-ದಂಡೆತ್ತಿ 
ಉಳಿವೆ ಬಳಿಯವರ  ತಡೆಗಟ್ಟಿ 

||90||

ಕಾದರೊಳ್ಳಿಯ  ಮುಂದೆ ಕಾದಿದರು  ಜಂಗಮರು 
ಕಾದಿ ಹಿಮ್ಮೆಟ್ಟಿ  ಜೈನರನು -ಮುರಗೋಡ 
ಹಾದಿಯೊಳು ಮುರಿದ ಮಾಚಯ್ಯ 


||91||

ತುಂಡ  ಜಂಗಮದಂಡು  ದಂಡನಾಯಕ ಮಾಚ 
ಕಂಡಕಂಡಲ್ಲಿ ವೈರಿಗಳ- ಚೆಲ್ಲಿದರು 
ಚಂಡು  ಕಳೆಕೊಂಡ ಮುರಿದ ಮಾಚಯ್ಯ 

||92||

ಬೆನ್ನ ಹತ್ತಿದ ವೈರಿ ತಣ್ಣಗಾಯಿತು ಚೆದರಿ 
ಮಣ್ಣಗೂಡಿಸಿದ ಮಾಚಯ್ಯ-ಕೈಯೆತ್ತಿ 
ಚಿನ್ಹವುಳಿಸಿದನು  ಲಿಂಗಿಗಳ 

||93||

ಹರಭಜನೆ ಗುರುಸೇವೆ ಉರುತರದಿ  ಮಾಡುತಲಿ 
ಶರಣಗಣ ಕೂಡಿ ಉಳಿವೆಯೊಳು -ಮರುದಿನವೆ 
ಮರೆಸಿದರು ತತ್ವಮಂಟಪವ 

||94||

ಚೆನ್ನಬಸವೇಶ್ವರನು  ಉನ್ನತನುಭಾವಿಗಳು 
ಚಿನ್ನಮಯವಾತು ಆ ಉಳಿವೆ- ಲಿಂಗಿಗಳ 
ಕನ್ನೆ ಭಕ್ತಿಯಾ ಗೂಡಾತು 

||95||

ಹರಣ ಭಕ್ತರ ಮಹಿಮೆ ಮರನದಲಿ ನೋಡೆಂದ
ಕರುಣೆಯಲಿ ಕಾಣೊ  ಗುರುಭಕ್ತಿ-ಮಾಚನಿಗೆ 
ಹರಸುತಲಿ ಹಾಡಿ  ಶಿವಲೋಕ     


||96||
ಶಿವನೆ ಶಿವದೋಹರನೆ  ಭವದೊಳಗೆ  ಬೇಡಿನ್ನು 
ತವಕದೊಯ್ಯಂದ ಮಾಚಯ್ಯ-ಹಿಪ್ಪರಗಿ 
ಗವಿಯ  ಸಂಗನೊಳು  ಒಂದಾದ 

||97||

ಹೂವಿನಾ  ಮಳೆಗರೆದು ಹೂವಿನಾ ರಾಶಾಗಿ 
ದೇವ  ಹಿಪ್ಪರಗಿ ಹೆಸರಾಗಿ - ಸಗ್ಗದಲಿ 
ಹೂವಾದ ಮಾಚ  ಶಿವಪದಕೆ 

||98||

ಶರಣ ಮಡಿವಾಳನಾದ  ಕರಿಬಂಟ ಕಣದೊಳಗೆ 
ಹರಳಾದ  ಕಣಕೆ  ಬಿಳಿ ಬಂಟ ಅಲ್ಲಮನು 
ಗುರುಬುದ್ಧಿವಂತ ಲಿಂಗಾದ 

||99||

ಹೊನ್ನೀಯ  ಹುಳದಂಗ ಮುನ್ನೂರು ದೀವಟಗಿ 
ಹೊನ್ನ ಹಿಪ್ಪರಗಿ  ಬೈಯಲಾಗ- ಮಾಚಯ್ಯ 
ಬನ್ನೀಯ  ಮುಡಿದು ಬರತಾನೊ 

||100||

ಹಂತಿಯದು  ಹಾಡೆಂದು ಪಂತಕಟ್ಟಲು  ಬೇಡ 
ಕಂತಿಕರಗವುದುದು ನಿಂತಲ್ಲೆ -ಮಾಚಯ್ಯ 
ಕುಂಟು ಎದೆಯೊಳಗೆ ಹಾಡಿಸಿದ 

||101||

ಶರಣು ಶರಣೆಂಬುವೆವು  ಹರಣ ಹಾರುವ ತನಕ 
ಕರುಣಿಸರಿ  ಶರಣ ಮಾಚಯ್ಯ-ನಮಗಿನ್ನು ಹರಸರಿ ಹುಲಿಸು ಹುಲ್ಹುಲ್ಲಿಗೊ 



>>>> ಇಲ್ಲಿಗೆ  'ಜನಪದ ತ್ರಿಪದಿಗಳಲ್ಲಿ ಮೂಡಿ  ಬಂ  ಮಡಿವಾಳ ಮಾಚಿದೇವರು'  ಬರಹ ಮುಕ್ತಾಯವಾಯಿತು...

ಮಡಿವಾಳ ಮಾಚಿದೇವರ ಬಗ್ಗೆ  ಇನ್ನಸ್ಟು ಮಾಹಿತಿಯನ್ನು  ಸ್ಕ್ಯಾನ್ ಮಾಡಿ  ಇಲ್ಲಿಗೆ ಸೇರಿಸುವೆ-ಗಮನಿಸಿ -ಎಲ್ಲರಿಗೂ ಈ ಪೇಜ್-ಬ್ಲಾಗ್ ಬಗ್ಗೆ ತಿಳಿಸಿ-ಮಡಿವಾಳ ಬಂಧುಗಳಿಗೆ  ನಮ್ಮ ಕುಲ ಮೂಲ ಮಹಾ ಪುರುಷರ ಬಗ್ಗೆ  ತಿಳಿಯುವ ಹಾಗೆ ಮಾಡಿ...

ಸರ್ವ ಮಡಿವಾಳ ಬಂಧುಗಳಿಗೆ ಶುಭ ಸಂಜೆ...


ಶುಭವಾಗಲಿ..




*****ಜೈ ಶ್ರೀ ವೀರ ಘಂಟಿ ಮಡಿವಾಳ ಮಾಚಿದೇವ********


   










ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ