ಶುಕ್ರವಾರ, ಜೂನ್ 28, 2013


ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ ಬಂದ ಮಡಿವಾಳರ ಬಗೆಗಿನ ಬರಹ 

ಓದಿ -

 ಶೇರ್ ಮಾಡಿ




ಸೌಜನ್ಯ :


ಕನ್ನಡ ಪ್ರಭ 


೧೬/ ೦೫ /೨೦೧೩ 


ಬರಹಗಾರರು : ಶ್ರೀಯುತ ಕೆ. ವಿ ಪ್ರಭಾಕರ್




.............................................................................................


ಬಟ್ಟೆಯಂತೆ ಹೊಳಪು ಕಂಡಿಲ್ಲ ಮಡಿವಾಳರ ಬದುಕು

ಜಾತಿಜ್ಯೋತಿ
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರವನಾದ..!
ಇದು ಜಗಜ್ಯೋತಿ ಬಸವೇಶ್ವರರ ಮಾತು. ಅಂದರೆ ಉದ್ಯೋಗ ಯಾವುದೇ ಆಗಿರಲಿ, ಅದರಲ್ಲಿ ಮೇಲು ಕೀಳು ಸಲ್ಲದು ಎಂಬುದು ಈ ಮಾತಿನ ಅರ್ಥ.  ಇಂಥಹ ಬಸವಣ್ಣನವರ ಕಟ್ಟಾ ಅನುಯಾಯಿ ಆಗಿದ್ದವರು ಮಡಿವಾಳ ಮಾಚಯ್ಯ ಅವರು. ಅಂದರೆ, ಅವರು ಮಡಿವಾಳ ಸಮುದಾಯಕ್ಕೆ ಸೇರಿದವರು. ನಾವು ಧರಿಸುವ ಬಟ್ಟೆಬರೆ ಶುಭ್ರವಾಗಿರಬೇಕು. ಅದಕ್ಕೆ ಇಸ್ತ್ರಿ ಆಗಬೇಕು ಎಂದರೆ ಮಡಿವಾಳರು ಬೇಕು. ಕೇವಲ ಬಟ್ಟೆಬರೆ ಶುಭ್ರ ಮಾಡುವುದಷ್ಟೇ ಅವರ ಕೆಲಸವಲ್ಲ. ಅವರ ಸಮುದಾಯವೂ ಅಷ್ಟೇ ಶುಭ್ರವಾದದ್ದು ಎಂದು ಬಸವೇಶ್ವರರೇ ಹೇಳಿದ್ದಾರೆ. ಸಮಾಜ ಎಷ್ಟೇ ಮುಂದುವರಿದಿದ್ದರೂ ಮಡಿವಾಳರ ಬದುಕಿನಲ್ಲಿ ಅಂಥ ಬದಲಾವಣೆಯೇನೂ ಕಂಡು ಬಂದಿಲ್ಲ. ನಗರ ಮತ್ತು ಪಟ್ಟಣ ಪ್ರದೇಶದಲ್ಲಿರುವವರು ಕೊಂಚ ಹೈಟೆಕ್ ಆಗಿದ್ದಾರೆ ಎಂದು ಹೇಳಬಹುದು. ಆದರೆ, ಗ್ರಾಮೀಣ ಭಾಗದಲ್ಲಿ ನೆಲೆಸಿ ಅಗಸ ವೃತ್ತಿಯಲ್ಲಿ ತೊಡಗಿಕೊಂಡವರ ಬದುಕು ಇನ್ನೂ ಹಸನಾಗಬೇಕಿದೆ.
ಮಡಿವಾಳರು ಬೇಕೇಬೇಕು
ಬಟ್ಟೆ ಒಗೆಯುವವರನ್ನು ಅಗಸ, ಮಡಿವಾಳ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಬಟ್ಟೆ ಒಗೆದು ಶುಭ್ರ ಮಾಡುವುದು ಮತ್ತು ಇಸ್ತ್ರಿ ಹಾಕುವುದು ಈ ಸಮುದಾಯದ ಮೂಲ ಕಸುಬು. ಇದಲ್ಲದೆ, ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿಯೂ ಈ ಸಮಾಜದವರು ಪ್ರಮುಖ ಪಾತ್ರ ವಹಿಸುತ್ತಾರೆ. ದೇವಾಲಯಗಳಲ್ಲೂ ಇವರಿಗೆ ವಿಶೇಷ ಸ್ಥಾನಮಾನವಿದೆ.  ದೇವರ ಮೆರವಣಿಗೆ ಹೊರಟ ಸಂದರ್ಭದಲ್ಲಿ ನಡೆಮುಡಿ ಹಾಸುವುದು ಇವರ ಕೆಲಸ. ಜೊತೆಗೆ ಪಂಜು ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ಕಾರ್ಯವೂ ಇವರದ್ದೇ. ಹಳ್ಳಿಗಳಲ್ಲಿ ಇಂದಿಗೂ ಮದುವೆ, ದೇವರ ಉತ್ಸವಗಳಿಗೆ ಮಡಿವಾಳರು ಬೇಕೇ ಬೇಕು.  ಗ್ರಾಮೀಣ ಪ್ರದೇಶದಲ್ಲಿ ಈ ಹಿಂದೆ ಮಡಿವಾಳರು ಬಟ್ಟೆ ಒಗೆದುಕೊಟ್ಟಿದ್ದಕ್ಕೆ ಪ್ರತಿಯಾಗಿ ಜನರಿಂದ ಹಣ ಪಡೆಯುತ್ತಿರಲಿಲ್ಲ. ಬದಲಿಗೆ ಆಹಾರ ಧಾನ್ಯವನ್ನು 'ಹಡದೆ' ರೂಪದಲ್ಲಿ ಪಡೆದುಕೊಳ್ಳುವ ವಾಡಿಕೆ ಇತ್ತು ಎನ್ನುತ್ತಾರೆ ಸಮಾಜದ ಹಿರಿಯರು. ಈ ಸಮುದಾಯಕ್ಕೆ ಕನ್ನಡದಲ್ಲಿ ಅಗಸ, ಮಡಿವಾಳ, ಧೋಬಿ ಎಂಬ ಹೆಸರಿದೆ. ಅದೇ ರೀತಿ ತಮಿಳಿನಾಡಿನಲ್ಲಿ ವನ್ನಾನ್, ಮರಾಠಿಯಲ್ಲಿ ಪಂಟ್, ಆಂಧ್ರದಲ್ಲಿ ಸಾಕಲ, ಮಹಾರಾಷ್ಟ್ರದಲ್ಲಿ ಪಂಟ್ ಮತ್ತು ಉತ್ತರ ಭಾರತದ ಕಡೆಯಲ್ಲಿ ಧೋಬಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದಲ್ಲಿನ ದಾಖಲೆಗಳ ಪ್ರಕಾರ ಮಡಿವಾಳರು ನೂರಾರು ವರ್ಷದ ಹಿಂದೆ ಒರಿಸ್ಸಾದಿಂದ ವಲಸೆ ಬಂದವರಂತೆ. ರಾಜ ಮಹಾರಾಜರ ಕಾಲದಲ್ಲಿ ಅವರು ಅರಮನೆಗಳಲ್ಲಿ ಕೆಲಸ ಮಾಡಿಕೊಂಡಿದ್ದಿರಬಹುದು. ರಾಜರ ಆಳ್ವಿಕೆ ಬಳಿಕ ಉದ್ಯೋಗ ಅರಸಿ ದೇಶದ ನಾನಾ ಭಾಗಗಳಿಗೆ ವಲಸೆ ಹೋಗಿರುವ ಸಾಧ್ಯತೆ ಇದೆ. ಮಡಿವಾಳರಲ್ಲಿ ಕನ್ನಡ, ತೆಲುಗು, ಕೊಂಕಣಿ, ಕೊಡವ, ಭಾಷೆಯವರಿದ್ದಾರೆ. ಸಸ್ಯಹಾರಿ, ಮಾಂಸಹಾರಿಗಳಿದ್ದಾರೆ.  ವಿಶೇಷ ಎಂದರೆ ಮಡಿವಾಳರು ಹಿಂದುಳಿದ ಜಾತಿಗೆ ಸೇರಿದವರು. ಅವರು ಶೈವ ಮತ್ತು ವೈಷ್ಣವ ಪಂಗಡದಲ್ಲಿದ್ದಾರೆ. ಉತ್ತರ ಕರ್ನಾಟಕದ ಕಡೆ ಕೆಲವರು ಲಿಂಗಾಯತ ಸಮುದಾಯಕ್ಕೆ ಮತಾಂತರಗೊಂಡಿದ್ದಾರೆ. ಅವರನ್ನು ಲಿಂಗಾಯತ ಮಡಿವಾಳ ಎಂದು ಕರೆಯುವುದುಂಟು. ಕರ್ನಾಟಕದ ದಕ್ಷಿಣ ಭಾಗದಲ್ಲಿ ಮಡಿವಾಳರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆಂಗಳೂರು, ಕೋಲಾರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಅವರ ಜನಸಂಖ್ಯೆ ಹೆಚ್ಚು. ಇನ್ನು ಬೆಳಗಾವಿ, ಕೊಡಗು, ಬಿಜಾಪುರ ಮತ್ತು ಬೀದರ್ ಜಿಲ್ಲೆಯಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ.
ಮಾಚಯ್ಯ, ಮಲ್ಲಿಗೆ ಮಾದೇವಿ
ಮಡಿವಾಳ ಸಮುದಾಯದವರಿಗೆ ಮಾಚಯ್ಯ ಆದರ್ಶ ಪುರುಷ. ಹಾಗೆಯೇ ಮಾದೇವಿ ಸಹ ಸಂತರಾಗಿದ್ದಾರೆ. ಜನರ ಮನದ ಮೈಲಿಗೆ ಮತ್ತು ಧರಿಸುವ ಬಟ್ಟೆಯ ಮೈಲಿಗೆಯನ್ನು ಕಳೆದ ಮಾಚಯ್ಯ ಧೀರ ಕಾಯಕದ ಹುರಿಯಾಳು. ದೈವತ್ವಕ್ಕೇರಿದ ಮಹಾಮಹಿಮ ಎಂದು ಅತ್ತಿಮಬ್ಬೆ ಪ್ರತಿಷ್ಠಾನದ ವಿಶ್ವಸ್ಥರಾದ ಡಾ. ವರದಾ ಶ್ರೀನಿವಾಸ್ ಅವರು ಹೇಳುತ್ತಾರೆ.  ಮಡಿವಾಳ ಸಮುದಾಯ ಎದುರಿಸುತ್ತಿರುವ ಕಷ್ಟ ಕಾರ್ಪಣ್ಯಗಳನ್ನು ಅವರು ಹೀಗೆ ವಿವರಿಸುತ್ತಾರೆ. ಬಟ್ಟೆ ಒಗೆಯುವ ಕಾಯಕದಲ್ಲಿರುವ ಅನೇಕ ಮಂದಿ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ನೀರಲ್ಲಿ ನೆಂದು ಅನೇಕರ ಕಾಲುಗಳು ಆನೆ ಕಾಲುಗಳಂತಾಗಿವೆ. ಬೆರಳುಗಳು ಕೆಂಪಾಗಿ ರಕ್ತ ಸುರಿಯುವಂತಿದೆ. ಕೆಲ ಕುಟುಂಬಗಳು ತೀರಾ ಕಷ್ಟದಲ್ಲಿದ್ದು ಅವರಿಗೆ ಸರ್ಕಾರ ಅಥವಾ ಜನಪ್ರತಿನಿಧಿಗಳು ನೆರವಾಗಬೇಕು ಎಂಬುದು ವರದಾ ಶ್ರೀನಿವಾಸ್ ಅವರ ಮನವಿ.
ಹೀನಾಯ ಪದ್ಧತಿ ನಿಷೇಧವಾಗಲಿ
ಮನುಷ್ಯ ಬಟ್ಟೆ ತೊಟ್ಟಾಗಿನಿಂದ ಮಡಿವಾಳರ ಕಾಯಕ ಆರಂಭವಾಯಿತು. ಮಡಿವಾಳರನ್ನು ಎಲ್ಲರೂ ಅವಲಂಬಿಸಲೇಬೇಕು. ಹಳ್ಳಿಗಳಲ್ಲಿ ಈ ವೃತ್ತಿ ನಿರಂತರವಾಗಿ ನಡೆಯುತ್ತಿದೆ. ಅಂದಹಾಗೆ ಹೆಣ್ಣುಮಕ್ಕಳು ಋತುಮತಿಯರಾದಾಗ ಅವರ ಬಟ್ಟೆಗಳನ್ನು ಮಡಿವಾಳರು ಶುಭ್ರ ಮಾಡುವಂತಹ ಹೀನಾಯ ಪದ್ಧತಿ ಹಳ್ಳಿಗಳಲ್ಲಿ ಇದೆ. ಅದನ್ನು ನಿಷೇಧಿಸಬೇಕು ಎನ್ನುತ್ತಾರೆ ವರದಾ ಶ್ರೀನಿವಾಸ್ ಅವರು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿಯೂ ಈ ಸಮುದಾಯ ಮುಂದುವರಿಯುವ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಇವರು ಇನ್ನೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪರಿಶಿಷ್ಟ ಜಾತಿಯವರಿಂದ ಮಡಿವಾಳರು ನೀರು ಮತ್ತು ಆಹಾರ ಸ್ವೀಕರಿಸುವುದಿಲ್ಲ. ಸಮಾನ ಮತ್ತು ಮೇಲ್ಜಾತಿಯವರಿಂದ ಮಾತ್ರ ಸ್ವೀಕರಿಸುತ್ತಾರೆ. ಬಟ್ಟೆ ಒಗೆದಿದ್ದಕ್ಕೆ ಪ್ರತಿಯಾಗಿ ಸುಗ್ಗಿ ಕಾಲದಲ್ಲಿ ಜಮೀನು ಮಾಲೀಕರಿಂದ ಆಹಾರ ಧಾನ್ಯ ಪಡೆಯುವ ಪದ್ಧತಿ ಇನ್ನೂ ಜೀವಂತವಾಗಿರುವುದರಿಂದ ಮಡಿವಾಳರ ಬದುಕು ಬಟ್ಟೆಯಂತೆ ಹೊಳಪು ಕಂಡಿಲ್ಲ. ನಾವೇನೋ ಎಲ್ಲರ ಬಟ್ಟೆಗಳನ್ನು ಒಗೆದು ಥಳಥಳ ಹೊಳೆಯುವಂತೆ ಮಾಡುತ್ತೇವೆ. ಅದರೆ, ನಮ್ಮ ಬದುಕಲ್ಲಿ ಬೆಳಕು ಕಾಣುವುದು ಯಾವಾಗ? ಎಂಬುದು ಈ ಸಮುದಾಯದ ಜನರ ಪ್ರಶ್ನೆ.
ಸಂಘದ ಚಟುವಟಿಕೆಗಳು
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ ಡಾ.ಸಿ.ಎಸ್.ದ್ವಾರಕಾನಾಥ್ ಅವರು ಮಡಿವಾಳರ ಏಳಿಗೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆ ವರದಿಯಲ್ಲಿ ಅನೇಕ ಶಿಫಾರಸುಗಳನ್ನೂ ಮಾಡಿದ್ದಾರೆ. ಆದರೆ, ಯಾವುದೂ ಈ ವರೆಗೆ ಜಾರಿಗೆ ಬಂದಿಲ್ಲ. ಈ ಸಮುದಾಯ ಇತ್ತೀಚೆಗೆ ಸಂಘಟನೆಯತ್ತ ಮುಖ ಮಾಡಿದ್ದು, ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಂಘ ಹಲವಾರು ಚಟುವಟಿಕೆಗಳ ಮೂಲಕ ಸಕ್ರಿಯವಾಗಿ ಕೆಲಸ ಮಾಡುತ್ತಿದೆ.
ಹಳ್ಳಿಗಳಲ್ಲಿ ನೆಲೆಸಿರುವ ಮಡಿವಾಳರ ಪೈಕಿ ಬಹುತೇಕ ಮಂದಿಗೆ ಮೂಲ ಕಸುಬು ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ. ಬೆಂಗಳೂರಿನಂತಹ ನಗರದಲ್ಲಿ ವ್ಯವಸ್ಥಿತ ಧೋಬಿ ಘಾಟ್ ಮತ್ತು ಅದರಲ್ಲಿ ವಿದ್ಯುತ್ ಚಾಲಿತ ಯಂತ್ರಗಳೂ ಬಂದಿವೆ. ಆದರೆ ಹಳ್ಳಿಗಳಲ್ಲಿ ಕೆರೆ, ಕುಂಟೆ ಅಥವಾ ಬಾವಿ ಇರುವೆಡೆಗೆ ಹೋಗಿ ಬಟ್ಟೆ ಒಗೆವ ಪರಿಸ್ಥಿತಿ ಇದೆ. ಮತ್ತೊಂದು ವಿಶೇಷ ಎಂದರೆ ದೇಶದ ಹದಿನಾರು ರಾಜ್ಯಗಳಲ್ಲಿ ಮಡಿವಾಳರನ್ನು ಪರಿಶಿಷ್ಟ ಜಾತಿ ಎಂದು ಪರಿಗಣಿಸಲಾಗಿದೆ. ಕರ್ನಾಟಕದಲ್ಲೂ ನಮ್ಮ ಸಮುದಾಯವನ್ನು ಆ ಗುಂಪಿಗೆ ಸೇರಿಸಬೇಕು ಎಂಬುದು ಮಡಿವಾಳರ ಸಂಘದ ಬೇಡಿಕೆ.
ಶಿಕ್ಷಣದಲ್ಲಿ ಬಾಲಕರು ಮುಂದು
ಶಿಕ್ಷಣದ ವಿಚಾರದಲ್ಲಿ ಹೇಳುವುದಾದರೆ ಈ ಸಮುದಾಯದ ಬಾಲಕರು ವಿದ್ಯಾಭ್ಯಾಸದಲ್ಲಿ ಬಾಲಕಿಯರಿಗಿಂತ ಮುಂದಿದ್ದಾರೆ. ಆದರೆ, ಉನ್ನತ ಶಿಕ್ಷಣದ ವರೆಗೆ ಹೋಗುವವರ ಸಂಖ್ಯೆ ಕಡಿಮೆ. ಉನ್ನತ ಶಿಕ್ಷಣ ದುಬಾರಿ ಆಗಿರುವುದರಿಂದ ಅದನ್ನು ಭರಿಸುವ ಶಕ್ತಿ ಅನೇಕರಿಗೆ ಇಲ್ಲ. ಹೀಗಾಗಿ ಸಮುದಾಯದ ಏಳಿಗೆ ಕೂಡ ಕಷ್ಟವಾಗಿದೆ. ಬಟ್ಟೆ ಒಗೆಯುವ ಸಂದರ್ಭದಲ್ಲಿ ಸಾಬೂನು ಮತ್ತು ರಾಸಾಯನಿಕ ಮಿಶ್ರಿತ ಸೋಡಾ, ಪುಡಿ ಬಳಕೆ ಮಾಡುವುದರಿಂದ ಆನಾರೋಗ್ಯಕ್ಕೂ ಒಳಗಾಗಿದ್ದಾರೆ.  ಇನ್ನು ವಾಷಿಂಗ್ ಮೆಷಿನ್‌ಗಳು ಮತ್ತು ಡ್ರೈಕ್ಲೀನರ್ ಕೇಂದ್ರಗಳು ಪ್ರವೇಶ ಪಡೆದ ಬಳಿಕವಂತೂ ಮಡಿವಾಳರ ಉದ್ಯೋಗಕ್ಕೆ ಹೊಡೆತ ಬಿದ್ದಿದೆ. ಜೊತೆಗೆ ಆದಾಯ ಪ್ರಮಾಣವೂ ಕುಸಿತ ಕಂಡಿದೆ. ಈ ಎಲ್ಲದರ ಮಧ್ಯೆಯೂ ಅವರು ಮೂಲ ಕಸುಬನ್ನು ಕಾಪಾಡಿಕೊಂಡು ಬಂದಿದ್ದಾರೆ.

-ಕೆ.ವಿ.ಪ್ರಭಾಕರ
prabhukolar@yahoo.com

ರಾಜ ಬಿಜ್ಜಳನ ಸೊಕ್ಕು ಅಡಗಿಸಿದ ಕಲಿ ರುದ್ರ ಮಡಿವಾಳ ಮಾಚಿ ದೇವರು

================================




ರಾಜ ಬಿಜ್ಜಳ- ಗುರು ಮಡಿವಾಳ ಮಾಚಿದೇವರ ಪಾದಾರವಿಂದಗಳಿಗೆ ಬಿದ್ದು ಕ್ಷಮೆ ಕೇಳುತ್ತಿರುವ ದೃಶ್ಯ . 
ಗುರು ಬಸವಣ್ಣ ಅವರನ್ನೂ ಕಾಣಬಹುದು 

>>>ಸನ್ನಿವೇಶವನ್ನು ಕಣ್ಣಿಗೆ ಕಟ್ಟುವ ಹಾಗೆ ಅನನ್ನ್ಯವಾಗಿ ಚಿತ್ರಿಸಿದ ಕಲಾವಿದರಿಗೆ ನಮ್ ನಮನ


ಶುಭವಾಗಲಿ

\।/